ಬೆಳಗಾವಿ ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಅಭಾವ ಎದುರಾಗಿದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ನೀರಿನ ಮಟ್ಟ ಕುಸಿದಿದ್ದು, ಕೃಷಿಗೆ ನೀರು ಬಳಕೆಗೆ ತಡೆ ನೀಡಲಾಗಿದೆ.
ಬೆಳಗಾವಿ: ಜಿಲ್ಲೆಯಲ್ಲಿ ಭೀಕರ ಬೇಸಿಗೆ ಆರಂಭವಾಗುವ ಮುನ್ನವೇ ತೀವ್ರ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಬರದ ಛಾಯೆ ಆವರಿಸಿದೆ. ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಗಣನೀಯವಾಗಿ ಕುಸಿಯುತ್ತಿದ್ದು, ಜಿಲ್ಲಾಡಳಿತವು ಮುಂದಿನ ಜೂನ್ ತಿಂಗಳವರೆಗೆ ಲಭ್ಯವಿರುವ ನೀರನ್ನು ಕೇವಲ
ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಕಾಯ್ದಿರಿಸಲು ಕಟ್ಟುನಿಟ್ಟಿನ ತೀರ್ಮಾನ ಕೈಗೊಂಡಿದೆ.
ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಮತ್ತು ನದಿಗಳಲ್ಲಿ ಜಲಮಟ್ಟ ಕುಸಿಯುತ್ತಿರುವುದು ಬೆಳಗಾವಿ ಜನತೆಯಲ್ಲಿ ಆತಂಕ ಮೂಡಿಸಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿರುವ ಜಿಲ್ಲಾಡಳಿತ, ಕಾಲುವೆಗಳಿಗೆ ಕೇವಲ ಕುಡಿಯುವ ಅಗತ್ಯಗಳಿಗಾಗಿ ಮಾತ್ರ ನೀರನ್ನು ಹರಿಸುತ್ತಿದೆ.
ಜಲಾಶಯಗಳಲ್ಲಿ ಕಳವಳಕಾರಿ ಮಟ್ಟಕ್ಕೆ ಕುಸಿದ ನೀರು:
ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಆತಂಕಕಾರಿ ಮಟ್ಟಕ್ಕೆ ಇಳಿದಿದೆ.
51 TMC ಒಟ್ಟು ಸಂಗ್ರಹ ಸಾಮರ್ಥ್ಯ ಹೊಂದಿರುವ
ಹಿಡಕಲ್ ಜಲಾಶಯದಲ್ಲಿ ಪ್ರಸ್ತುತ
40 TMC ನೀರು ಮಾತ್ರ ಬಾಕಿ ಉಳಿದಿದೆ. ಬೇಸಿಗೆಯ ನೀರಿನ ಅಭಾವ ನೀಗಿಸಲು ಈಗಾಗಲೇ ಜಲಾಶಯದಿಂದ
8 TMC ನೀರನ್ನು ಬಿಡುಗಡೆ ಮಾಡಲಾಗಿದೆ. ಇನ್ನು
37 TMC ಸಾಮರ್ಥ್ಯದ
ನವಿಲುತೀರ್ಥ (ಮಲಪ್ರಭಾ) ಜಲಾಶಯದಲ್ಲಿ ಕೇವಲ
14 TMC ನೀರು ಬಾಕಿ ಇದ್ದು, ಅದರಲ್ಲಿ
2 TMC ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲಾಗುತ್ತಿದೆ.
ಕೃಷಿಗೆ ನೀರು ತಡೆಯಲು ‘ಪವರ್ ಕಟ್’ ಅಸ್ತ್ರ:
ನದಿ ಹಾಗೂ ಕಾಲುವೆಗಳ ನೀರನ್ನು ರೈತರು ಕೃಷಿ ಜಮೀನುಗಳಿಗೆ ಅನಧಿಕೃತವಾಗಿ ಬಳಸಿಕೊಳ್ಳುವುದನ್ನು ತಡೆಯಲು ಜಿಲ್ಲಾಡಳಿತ ಮತ್ತು ವಿದ್ಯುತ್ ಸರಬರಾಜು ಮಂಡಳಿ
ವಿದ್ಯುತ್ ಕಡಿತದ ಅಸ್ತ್ರ ಪ್ರಯೋಗಕ್ಕೆ ಮುಂದಾಗಿವೆ. ನದಿ ಪಾತ್ರದ ಪ್ರದೇಶಗಳಲ್ಲಿ ಪ್ರಸ್ತುತ ವಾರದಲ್ಲಿ
2 ದಿನ ಕೃಷಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಬೇಸಿಗೆ ತೀವ್ರಗೊಂಡರೆ ಈ ವಿದ್ಯುತ್ ಕಡಿತವನ್ನು ವಾರದಲ್ಲಿ
3 ದಿನಗಳಿಗೆ ಹೆಚ್ಚಿಸುವ ಸಾಧ್ಯತೆಯಿದೆ. ಇದರಿಂದಾಗಿ ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ರೈತ ಸಮುದಾಯ ಕಂಗಾಲಾಗಿದೆ.
ಜಿಲ್ಲಾಡಳಿತದ ಸೂಚನೆ:
"ಮುಂದಿನ ಜೂನ್ ಕೊನೆಯವರೆಗೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಾಗದಂತೆ ನೋಡಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದೆ. ಜಲಾಶಯ ಹಾಗೂ ನದಿಗಳ ನೀರನ್ನು ಕೇವಲ ಕುಡಿಯುವ ನೀರಿಗಾಗಿ ಕಾಯ್ದಿರಿಸಲಾಗಿದ್ದು, ಸಾರ್ವಜನಿಕರು ನೀರನ್ನು ಅತ್ಯಂತ ಮಿತವಾಗಿ ಬಳಸಬೇಕು."
- ಮೊಹಮ್ಮದ್ ರೋಷನ್, ಬೆಳಗಾವಿ ಜಿಲ್ಲಾಧಿಕಾರಿ
ಒಟ್ಟಿನಲ್ಲಿ ಬೇಸಿಗೆಯ ಆರಂಭಕ್ಕೂ ಮುನ್ನವೇ ಬೆಳಗಾವಿ ಜಿಲ್ಲೆಯಲ್ಲಿ ಜಲಕ್ಷಾಮದ ಮುನ್ಸೂಚನೆ ಸಿಕ್ಕಿದ್ದು, ಮುಂದಿನ ಜೂನ್‌ವರೆಗೆ ಲಭ್ಯವಿರುವ ನೀರನ್ನು ಕಾಯ್ದುಕೊಳ್ಳುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.